ಬುಧವಾರ, ನವೆಂಬರ್ 2, 2011

ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕರುನಾಡ ತಾಯಿ ಸದಾ ಚಿನ್ಮಯಿ...








ಕನ್ನಡ ತಾಯಿಯ ಮಕ್ಕಳು ನಾವು ಭಾಗ್ಯವಂತರು
ಕರುನಾಡ ಹೆಮ್ಮೆಯ ಕುಡಿಗಳು ನಾವೇ ಸಿರಿವಂತರು
ಶ್ರೀಗಂಧದ ಸೊಬಗಿನಲ್ಲಿ ಕಸ್ತೂರಿ ಕಂಪಿನ ನಾಡು ನಮ್ಮದು
ಹಸಿರು ವನದ ಚೆಲುವ ಬೀರಿ ಮೆರೆವ ಬೀಡು ನಮ್ಮದು
ಜೋಗದ ಸಿರಿ ಬೆಳಕಿನಲ್ಲಿ ಹೊಳೆವ ಚೆಲುವ ನಾಡಿದು
ಸುರಿವ ಮಳೆ ಹನಿಯಲ್ಲು ಕನ್ನಡದ ಹೊನಲು ಸುರಿವುದು
ಸಂಸ್ಕೃತಿಯ ತವರೂರು ನಮ್ಮ ಚೆಲುವ ನಾಡಿದು
ಈ ತನುಜಾತೆಯ ಮಡಿಲಲ್ಲಿ ಜನಿಸಿದ ಪುಣ್ಯ ನಮ್ಮದು
ಕಾವೇರಿಯ ಹೃದಯದಲ್ಲಿ ಜೇನಿನ ಹೊಳೆಯು ಹರಿವುದು
ಮರೆಯದಿರು ಕನ್ನಡವ ಈ ನಿನ್ನ ಜೀವವಿರುವವರೆಗೂ
ಈ ಮಣ್ಣಿನ ಮಮತೆಯು ನಿನಗೆ ಜನ್ಮ ನೀಡಿಹುದು
ತೊರೆಯದಿರು ಕನ್ನಡವ ಬೆಳೆಸದಿರು ಪರಭಾಷೆಯ ವ್ಯಾಮೋಹವ
ಕನ್ನಡಕ್ಕೆ ಸಾಟಿಯಿಲ್ಲ ಇಲ್ಲಿ ಹುಟ್ಟುವ ಪುಣ್ಯ ಎಲ್ಲರಿಗು ದೊರೆಯುವುದಿಲ್ಲ...
ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕರುನಾಡ ತಾಯಿ ಸದಾ ಚಿನ್ಮಯಿ...

ಗುರುವಾರ, ಮಾರ್ಚ್ 10, 2011

ನಮ್ಮೊಲವ ಕಾದಂಬರಿ ಬರೆಯುವೆ ಕೈ ನನದಾಗಲಿ...




ಬಾ ಕನಸೇ ಜೊತೆಯಲ್ಲಿ
ಒಂದಾಗು ನನ್ನ ಬಾಳಿನಲಿ
ನೀ ನಡೆವ ಹಾದಿಯಲಿ
ಮುಳ್ಳೆಲ್ಲ ಹೂವಾಗಲಿ
ನಿನ್ನೊಲವ ಹೊನಲಿನಲ್ಲಿ
ಸಿಹಿ ಪಾಲು ನನಗಿರಲಿ
ಚಿಮ್ಮುವ ನೀರ ಹನಿಯಲಿ
ನಿನ್ನ ಹೂ ನಗುವು ಕಂಗೊಳಿಸಲಿ
ನೀ ಕೊಡುವ ಸಿಹಿ ಪ್ರೀತಿಯಲಿ
ಈ ಜೀವನ ಕೊನೆಗೊಳ್ಳಲಿ
ನಮ್ಮೊಲವ ಕಾದಂಬರಿ
ಬರೆಯುವ ಕೈ ನನದಾಗಲಿ...

ಶುಕ್ರವಾರ, ಫೆಬ್ರವರಿ 11, 2011

ಮನಸಿನ ಮಾತು....



ಕಂಗಳಲಿ ಅವಿತಿರುವ ಕಣ್ಣೀರಿನ ಕಥೆಯ ಹೇಳಲಾರದೆ ಬಳಲುತಿದೆ ಈ ಮನವು

ಒಡಲೊಳಗೆ ಕೊರಗುತ್ತ ನಗಲಾಗದೆ ಮರುಗುತಿದೆ ಈ ತನುವು

ಈ ನೋವಿಗೆ ಕಾರಣವೇನೆಂದು ಹೇಳಲಾಗದೆ ನಡುಗುತಿದೆ ಹೃದಯವು

ಮನದಲ್ಲಿ ದುಗುಡವ ಅಡಗಿಸಿಕೊಂಡು ನಗಲಾರೆ ಎಂದಿದೆ ಈ ಮೊಗವು

ಈ ಇರುಳು ಕವಿದ ಮನಕೆ ಬೆಳಕು ನೀಡುವರು ಯಾರೋ ನಾ ಅರಿಯಲಾರೆ..?

ಎಂದೋ ಕರಗಿರುವ ಪ್ರೇಮ ಚಂದಮಾಮ ಹೊರಟುಬಿಡುವ ಕಾರ್ಮುಗಿಲ ಚಿಥೆಗೆ

ಇಂದು ಜೊತೆಗೇನೆ ಸಾಗೋ ನನ್ನ ನೆರಳು ಬೇಸರದಿ ಬರುತಲಿದೆ ಜೊತೆಗೆ

ಮುಳ್ಳುಗಳ ನಡುವೆ ಅಡಗಿರುವ ಈ ಹೂವಿಗೆ ಸಂತಸವ ನೀಡುವರು ಯಾರೋ ನಾ ಅರಿಯಲಾರೆ...?

ಗುರುವಾರ, ಫೆಬ್ರವರಿ 10, 2011

ನೀ ನನ್ನಿಂದ ದೂರವಾದರೇನಂತೆ ಎಂದೆಂದಿಗೂ ನಾ ನಿನ್ನವಳಾಗಿರುವೆನು...


ಮನಸು ಹಂಚಿಕೊಂಡೆನು ನೀನಿಟ್ಟ ಕನಸು ನೆಚ್ಚಿಕೊಂಡೆನು
ಈ ಹೃದಯದ ಕೋಟೆಯೊಳಗೆ ನಿನ್ನ ಬಿಂಬವ ಸ್ತಾಪಿಸಿಕೊಂಡೆನು
ಹಗಲಿರುಳು ನಿನ್ನ ನೆನಪಲ್ಲೇ ನಾ ಕಾಲವನ್ನು ಸರಿಸಿಕೊಂಡೆನು
ನಿನ್ನೊಲವ ಹೂಬನದಲ್ಲಿ ಚಿಟ್ಟೆಯಂತೆ ಹಾರಿ ನಾ ನಿನ್ನವಳಾದೆನು
ಇಂದೇನಾಯಿತು ನಿನಗೆ ನನ್ನಲ್ಲಿ ಅದ್ಯಾವ ತಪ್ಪು ಕಂಡೆಯೋ ನಾ ಅರಿಯೆನು
ಕಂಗಳು ನಾ ನೋಟವು ನೀ ನೀನಿರದೆ ಗೆಳೆಯ ಅಂಧಳು ನಾನು
ನೀರಿರದೆ ಮೀನಿರದು ನೇಸರನು ಇರದೆ ಹಸಿರಿರುವುದೇನು
ಮನಸಲ್ಲೇ ಒಂದಾದ ಈ ಪ್ರೀತಿಗೆ ದೂರ ಇಂದು ನ್ಯಾಯವೇನು
ಪ್ರತಿ ಕಣ್ಣ ಹನಿಯನ್ನು ನಿನ್ನ ನೆನಪಿಗೆಂದೇ ನಾ ಮೀಸಲಿಟ್ಟೆನು
ನೀ ಕೊಟ್ಟ ಸಿಹಿ ಪ್ರೀತಿಯ ನಾ ಮರೆತು ಕೂಡ ಮರೆಯಲಾರೆನು
ನನ್ನುಸಿರ ಕಣಕಣದಲ್ಲೂ ನಿನ್ನಯ ಹೆಸರ ಬರೆದಿಡುವೆನು
ನೀ ನನ್ನಿಂದ ದೂರವಾದರೇನಂತೆ ಎಂದೆಂದಿಗೂ ನಾ ನಿನ್ನವಳಾಗಿರುವೆನು...